28/12/2023
ಜ್ಯೋತಿಷ್ಯ ಸಾರಸಂಗ್ರಹ
ಲೇಖಕರು: ಎಂ. ರಾಮಸ್ವಾಮಿ
ಈ ಜ್ಯೋತಿಷ್ಯ ಸಾರಸಂಗ್ರಹದಲ್ಲಿ ಹನ್ನೆರಡು ಪ್ರಕರಣಗಳಿವೆ ; ೧. ಗ್ರಹಕಾರಕ ಪ್ರಕರಣ ; ೨. ಷಡ್ವರ್ಗ ಮತ್ತು ಭಾವ ಪ್ರಕರಣ ; ೩. ಲಗ್ನ ಪ್ರಕರಣ ; ೪. ನಕ್ಷತ್ರ ಮತ್ತು ರಾಶಿ ಪ್ರಕರಣ ; ೫. ಗ್ರಹರಾಶಿ ಶೀಲ ಪ್ರಕರಣ ; ೬. ಗ್ರಹದೃಷ್ಟಿ ಮತ್ತು ಸಮಾಗಮ ಪ್ರಕರಣ ; ೭. ದಶಾಂತರ್ದಶಾ ಪ್ರಕರಣ ; ೮. ರಾಜಯೋಗಾದಿ ಪ್ರಕರಣ ; ೯. ಅಷ್ಟಕವರ್ಗ ಪ್ರಕರಣ ; ೧೦. ಸ್ತ್ರೀಜಾತಕ ಪ್ರಕರಣ ; ೧೧. ಪ್ರಶ್ನಶಾಸ್ತ್ರ ಪ್ರಕರಣ ; ೧೨. ಪರಿಶಿಷ್ಟ ಪ್ರಕರಣ.
ಮೇಲ್ಕಂಡ ದ್ವಾದಶ ಪ್ರಕರಣಗಳು ದ್ವಾದಶರಾಶಿಗಳ ಅಧಿಪತಿಗಳಾದ ನವಗ್ರಹಗಳ ಅಭಿಮಾನದೇವತೆಗಳಿಗೆ ಅರ್ಪಣೆಗಳಾಗಲೆಂದು ಆಶಿಸುತ್ತೇನೆ.
ಒಂದನೆಯ ಪ್ರಕರಣವಾದ ಗ್ರಹಕಾರಕ ಪ್ರಕರಣದಲ್ಲಿ ಗ್ರಹಗಳ ನೈಸರ್ಗಿಕ ಸ್ವಭಾವಗಳೂ ಮತ್ತು ಗ್ರಹಗಳು ಯಾವ ಯಾವ ವಿಷಯಗಳನ್ನು ಸೂಚಿಸುತ್ತವೆಯೆಂಬುದು ವಿವರಿಸಲ್ಪಟ್ಟಿದೆ.
ಎರಡನೆಯದಾದ ಷಡ್ವರ್ಗ ಮತ್ತು ಭಾವ ಪ್ರಕರಣದಲ್ಲಿ ಲಗ್ನಾದಿ ಷಡ್ವರ್ಗಗಳು ಅಥವಾ ಆರು ಭಾಗಗಳನ್ನು ನಿರ್ಣಯಿಸುವ ಕ್ರಮ ಮತ್ತು ದ್ವಾದಶಭಾವಗಳು ಸೂಚಿಸುವ ವಿಷಯಗಳೂ, ದ್ವಾದಶಭಾವಗಳಲ್ಲಿ ಗ್ರಹಗಳಿದ್ದರೆ ಉಂಟಾಗುವ ಫಲಗಳೂ ನಿರೂಪಿತವಾಗಿವೆ.
ಮೂರನೆಯದಾದ ಲಗ್ನಪ್ರಕರಣದಲ್ಲಿ ಮೇಷ, ವೃಷಭಾದಿ ದ್ವಾದಶಲಗ್ನಗಳಲ್ಲಿ ಹುಟ್ಟಿದವರ ಸ್ವಭಾವಗಳು ಪರಿಶೀಲಿಸಲ್ಪಟ್ಟಿರುವುದಲ್ಲದೆ, ಆಯಾ ಲಗ್ನಗಳಿಗೆ ಯೋಗಕಾರಕರೂ ಮತ್ತು ಮಾರಕರೂ ಯಾವ ಗ್ರಹಗಳಾಗುತ್ತಾರೆ ? ಮತ್ತು ಅವರು ತಮ್ಮ ದೆಶೆಗಳಲ್ಲಿ ಯಾವ ರೀತಿ ಫಲಗಳನ್ನು ಕೊಡುತ್ತಾರೆ ಎಂಬ ವಿಚಾರಗಳೆಲ್ಲಾ ಉದಾಹರಣೆಗಳ ಮೂಲಕ ವಿವರಿಸಲ್ಪಟ್ಟಿದೆ.
ನಾಲ್ಕನೆಯದಾದ ನಕ್ಷತ್ರ ಮತ್ತು ರಾಶಿ ಪ್ರಕರಣದಲ್ಲಿ ಇಪ್ಪತ್ತೇಳು ನಕ್ಷತ್ರಗಳಲ್ಲಿ ಹುಟ್ಟಿದವರ ಸಾಮಾನ್ಯ ಸ್ವಭಾವಗಳು ವಿವರಿಸಲ್ಪಟ್ಟಿರುವುದಲ್ಲದೆ ಮೇಷಾದಿ ದ್ವಾದಶ ರಾಶಿಗಳಲ್ಲಿ ಚಂದ್ರನಿರುವಾಗ ಹುಟ್ಟಿದವರ ಸ್ವಭಾವಗಳೂ ತಿಳಿಸಲ್ಪಟ್ಟಿವೆ.
ಅನಂತರ ಐದನೆಯದಾದ ಗ್ರಹರಾಶಿಶೀಲ ಪ್ರಕರಣದಲ್ಲಿ ನವಗ್ರಹಗಳು ಬೇರೆ ಬೇರೆ ರಾಶಿಗಳಲ್ಲಿದ್ದರೆ ಪ್ರತ್ಯೇಕವಾದ ಫಲಗಳನ್ನು ಯಾವ ರೀತಿ ಕೊಡುತ್ತಾರೆಂಬುದನ್ನು ವಿವರಿಸಿದೆ. ಆರನೆಯ ಪ್ರಕರಣವಾದ ಗ್ರಹದೃಷ್ಟಿ ಮತ್ತು ಸಮಾಗಮ ಪ್ರಕರಣದಲ್ಲಿ ಹಿಂದಿನ ಪ್ರಕರಣದಲ್ಲಿ ತಿಳಿಸಿರುವ ಗ್ರಹರಾಶಿ ಶೀಲಗಳು ಯಾವ ರೀತಿ ಗ್ರಹಗಳು ಒಂದೇ ರಾಶಿಯಲ್ಲಿರುವುದರಿಂದಲೂ, ಪರಸ್ಪರ ಒಬ್ಬರನ್ನೊಬ್ಬರು ನೋಡುವುದರಿಂದಲೂ, ಮಾರ್ಪಾಟನ್ನು ಹೊಂದುತ್ತವೆಂಬುದು ಕೂಲಂಕಷವಾಗಿ ವಿವರಿಸಲ್ಪಟ್ಟಿದೆ.
ಏಳನೆಯದಾದ ದಶಾಂತರ್ದಶಾ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯ ಜನನಕಾಲದ ನಕ್ಷತ್ರಕ್ಕನುಗುಣವಾದ ಪರಾಶರೋಕ್ತ ಉಡು ಅಥವಾ ನಕ್ಷತ್ರ ದೆಶೆಗಳನ್ನೂ ಅವುಗಳಲ್ಲಿನ ಭುಕ್ತಿ ಮತ್ತು ಅಂತರ್ಭುಕ್ತಿಗಳೇ ಮೊದಲಾದ ಭಾಗಗಳನ್ನೂ ಕಂಡುಹಿಡಿಯುವ ಕ್ರಮಗಳೂ, ಮತ್ತು ಗ್ರಹಗಳು ತಮ್ಮ ತಮ್ಮ ದಶಾಂತರ್ದೆಶೆ ಅಥವಾ ಭುಕ್ತಿಗಳಲ್ಲಿ ಯಾವ ರೀತಿ ಜಾತಕರಿಗೆ ಫಲಗಳನ್ನು ಕೊಡಬಹುದು. ಎಂಬ ವಿಷಯಗಳನ್ನು ಸಮಗ್ರವಾಗಿ ಉದಾಹರಣೆಗಳ ಮೂಲಕ ವಿವರಿಸಲಾಗಿದೆ.