08/06/2026
ಕ್ರಾಂತಿಯ ಜೊತೆಯಲ್ಲಿಯೇ ಬೆಳೆಯುತ್ತಾ ಹೋದ ಇಬ್ಬರು ತರುಣ ಕ್ರಾಂತಿಕಾರಿಗಳ ಕಥೆ ಇದು. ಅವರ ಒಲವು ಸಹ ಹಾಗೇ ಮಾಗುತ್ತ ಹೋಗಿದೆ. ಅವರಿಬ್ಬರಲ್ಲಿ ವಯಸ್ಸಿನ ಅಂತರವಿದೆ. ಅವನು ದೊಡ್ಡ ನಾಯಕ. ಆಕೆ ಎಳೆಯ ತರುಣಿ. ಆದರೆ ಅದು ಪ್ರೇಮದಲ್ಲಿನ ಸಮಾನತೆಗೆ ಧಕ್ಕೆ ತರುವುದಿಲ್ಲ. ಚೆ ಸಾಕಷ್ಟು ದೊಡ್ಡವನಾದರೂ ಅವನಲ್ಲಿ ತುಂಟತನವಿದೆ, ಸಾಹಸವಿದೆ. ಅದೆಲ್ಲದರ ಜೊತೆಗೆ ಮಡದಿ-ಮಕ್ಕಳ ಬಗ್ಗೆ ಜವಾಬ್ದಾಲ ಸಹ ಇದೆ.
"ಎಲ್ಲಿಯೂ ನಿಲ್ಲದೆ ಮನೆಯನೆಂದೂ ಕಟ್ಟದೆ" ಅನಿಕೇತನನಾಗಲು ಹೊರಟ ಚೆ ಇಲ್ಲಿ ಅಲೈಡಾ ಜೊತೆ ಗೂಡು ಕಟ್ಟಿಕೊಳ್ಳುತ್ತಾನೆ. ಆದರೆ ತನ್ನ ಬದುಕನ್ನು ತೆರೆದಿಟ್ಟ ಪುಸ್ತಕದಂತೆ, ಪಾರದರ್ಶಕವಾಗಿಡಲು ಪ್ರಯತ್ನಿಸುತ್ತಾನೆ. ಸಂಸಾರ ನನ್ನ ಕ್ರಾಂತಿಕಾರಿ ಸ್ಫೂರ್ತಿಗೆ ಸರಪಳಿಯಾಗಬಾರದು ಎಂದು ಕಳವಳಗೊಳ್ಳುತ್ತಾನೆ. ಅಲೈಡಾ ಗೂಡನ್ನು ಕಟ್ಟಬೇಕು, ಅದರಲ್ಲಿ ಮಕ್ಕಳನ್ನು ಸಾಕಬೇಕು ಎಂದು ಆಸೆಪಡುತ್ತಾಳೆ. ಚೆ ನ ಗಂಡುಮಕ್ಕಳ ಕುರಿತಾದ ಆಕರ್ಷಣೆಯನ್ನೂ ಛೇಡಿಸುತ್ತಾಳೆ. ಆದರೆ ಚೆ ಗೆ ಎಲ್ಲಾ ಮಕ್ಕಳೂ ಒಂದೇ ಎಂಬುದೂ ಸತ್ಯ.
ಇಂತಹ ಆಪ್ತ ಕೌಟುಂಬಿಕ ವಿಷಯಗಳನ್ನು ಅಲೈಡಾ ನಿರ್ಭಿಡೆಯಿಂದ ಚರ್ಚಿಸಿದ್ದಾಳೆ. ಅವಳು ವ್ಯವಸ್ಥಿತ, ಸುಭದ್ರ ಜೀವನಕ್ಕಾಗಿ ಹಂಬಲಿಸಿ ಬದುಕಿನ ಧೈರ್ಯವನ್ನು ಮರೆಯುವಳಲ್ಲ. ಅವಳು ಕ್ರಾಂತಿಕಾರಿಗೆ ಅಡೆತಡೆ ಅಲ್ಲ, ಅವಳೊಬ್ಬ ವೇಗವರ್ಧಕಳು. ಅವಳಲ್ಲೂ ಮನೆ ಮತ್ತು ಜಗತ್ತಿನ ನಡುವೆ ಸಮತೋಲನ ಸಾಧಿಸುವ ಸಂಘರ್ಷ ಜೀವಂತವಾಗಿದೆ. ಅವರಿಬ್ಬರ ಪ್ರೇಮದಲ್ಲಿ ಸದಾ ನಿಲ್ಲದ ಶೃತಿಯಂತೆ ಮಿಡಿಯುವುದು ಅದೇ ಸಾಮಾಜಿಕ ಬದ್ಧತೆಯೇ.
ಐದು ಮಕ್ಕಳನ್ನು ಸಲಹುತ್ತಾ ಅದೇ ಸಮಯದಲ್ಲಿ ಎಲ್ಲವನ್ನೂ ತೊರೆದು ಮತ್ತೊಮ್ಮೆ ಬಂದೂಕು ಹಿಡಿದು ಆ ಮನೆ ತೊರೆದ ಗೆಲಲ್ಲಾ ಯೋಧನ ಜೊತೆ ಸಮರಕ್ಕಿಳಿಯಬೇಕೆಂಬ ತುಡಿತ ಅವಳದ್ದು. ಹಾಗಾಗಿ ಅವಳು ಅಜ್ಞಾತವಾಸದಲ್ಲಿದ್ದ ಗಂಡನ ಜೊತೆ ಕಾಂಗೋ, ಯುರೋಪು ಎಲ್ಲೆಡೆ ಹೋಗುತ್ತಾಳೆ. ತನ್ನ ಗಂಡನಾದ ಈ ಅಮೂಲ್ಯ ವಸ್ತುವನ್ನು ಕಾಪಾಡಿಕೊಳ್ಳಬೇಕೆಂದು ಹಂಬಲಿಸುತ್ತಾಳೆ.
(ಬೆನ್ನುಡಿಯಿಂದ..)