01/06/2023
*ಸಾತ್ವಿಕ ಆತ್ಮವಿಶ್ವಾಸದ ಪ್ರತೀಕ*
ಕೆಲವು ದಿನದ ಹಿಂದೆ ರಾಜೇಶ್ವರಿ ಯವರ ಜೀವನೋತ್ಸಾಹ ಕುರಿತು ಕಿರುಲೇಖನ ವೊಂದನ್ನು ಬರೆದಿದ್ದೆ..ಆದರೆ ಇಷ್ಟು ಬೇಗ ಅವರು ಆಗಲಿ ಹೋಗುತ್ತಾರೆ ಎಂದು ಭಾವಿಸಿರಲಿಲ್ಲ. ಸ್ವಲ್ಪ ದಿನದ ಹಿಂದೆ ಮಾತನಾಡಿದಾಗ ಹಿಮೋಗ್ಲೋಬಿನ್ ಕಡಿಮೆ ಆಗಿದೆ, ಸ್ವಲ್ಪ ಆಯಾಸ ಅನಿಸುತ್ತದೆ ಅಂದಿದ್ದರು..ನಾಡಿದ್ದು ಡಿಸೆಂಬರ್ ಹನ್ನೊಂದಕ್ಕೆ 84 ತುಂಬಿ 85 ಕೆ ಅಡಿಯಿಡುತ್ತೇನೆ,ಆಯಾಸ ಸಹಜ ಅಂತ ಅವರೇ ಹೇಳಿದರು..ತಮ್ಮ ಅಂತಸ್ತಿನ ಅಹಮಿಕೆ ಇಲ್ಲದೆ ತುಂಬಾ ಸರಳವಾಗಿ ಮಾತನಾಡುತ್ತಿದ್ದ ಅವರ ಜತೆ ಮಾತು ನನಗೆ ಯಾವಾಗಲೂ ಖುಷಿ ಕೊಡುತ್ತಿತ್ತು.
ಕುಪ್ಪಳಿಯ ಕಾರ್ಯಕ್ರಮಗಳಿಗೆ ತೇಜಸ್ವಿಯವರ ಜತೆ ಬರುತ್ತಿದ್ದ ಅವರು ವೇದಿಕೆಯ ಮೇಲೆ ನಡೆಯುತ್ತಿದ್ದ ಕುವೆಂಪು ಸಾಹಿತ್ಯ ಕುರಿತ ಭಾಷಣ ಗಳನ್ನೋ ಅಥವಾ ಇನ್ಯಾವುದೋ ಮಾತುಕತೆಯನ್ನು ಗಂಭೀರವಾಗಿ ಕೇಳಿಸಿಕೊಳ್ಳುತ್ತಿದ್ದ ರು ಮತ್ತು ಪ್ರತಿಕ್ರಿಯಿಸುತ್ತಿದ್ದರು. ಸಾಹಿತ್ಯ ಅಧ್ಯಯನ ಶಿಬಿರ ಕಮ್ಮಟ ಗಳಲ್ಲಿ, ಅವರು ಶಿಬಿರಾರ್ಥಿಗಳಿಗೆ ಕಡಿಮೆಯಿಲ್ಲ ದಂತೆ ಆಸಕ್ತಿ ಯಿಂದ ಭಾಗವಹಿಸುತ್ತಿದ್ದರು.
2002 ರಲ್ಲಿ ನಾನು ಪತ್ರಿಕೆ ಯೊಂದಕ್ಕಾಗಿ ಅವರ ಸಂದರ್ಶನ ಬೇಕೆಂದಾಗ ಪ್ರಶ್ನೆ ಕಳುಹಿಸಿ ಉತ್ತರ ಬರೆದು ಕಳುಹಿಸುತ್ತೇನೆ ಅಂದರು..ತೇಜಸ್ವಿ ಯವರ ಜತೆ ಮದುವೆ,ಪ್ರೀತಿ ಕುರಿತು ಮೊದಲನೇ ಸಲ ಅವರು ಅಲ್ಲಿ ಬರೆದಿದ್ದಾರೆ..ಅದು ಕಾಡಿನ ಒಡತಿಯ ಒಡನಾಟ ಎಂಬ ಹೆಸರಿನಲ್ಲಿ ಪ್ರಕಟ ವಾಗಿ ತುಂಬಾ ಜನ ರಾಜೇಶ್ವರಿ ಯವರ ಜತೆ ಮಾತನಾಡಿ ತಮ್ಮ ಮೆಚ್ಚುಗೆ ಸೂಚಿಸಿದರು.
ಆಮೇಲೆ ಹಲವು ಸಲ ಅವರ ಮನೆಗೆ ಹೋದೆವು. ತೇಜಸ್ವಿ ಇದ್ದಾಗ ಎರಡು ಸಲ ಮಾತ್ರ ಹೋಗಿದ್ದು..ರಾಜೇಶ್ವರಿ ಮತ್ತು ತೇಜಸ್ವಿ ಮೊದಲ ಸಲ
ನಮ್ಮ ಮನೆಗೆ ಬಂದಿದ್ದು 1995 ರಲ್ಲಿ ಕಾರ್ಯಕ್ರಮ ವೊಂದಕ್ಕೆ ಬಂದಾಗ ..ಆಮೇಲೆ ಮತ್ತೆ ಒಮ್ಮೆ ಬಂದಾಗ ತೇಜಸ್ವಿ ತಮ್ಮ ಹಕ್ಕಿ ಚಿತ್ರಗಳನ್ನು ನಮ್ಮ ಡೆಸ್ಕ್ಟಾಪ್ ಗೆ ಹಾಕಿ ಕೊಟ್ಟಿದ್ದರು.ಅದು 1998 ರಲ್ಲಿ.. ಹೀಗೆ ತೇಜಸ್ವಿ ಎಲ್ಲಾದರೂ ಹೋಗುವುದು ಅಂದರೆ ರಾಜೇಶ್ವರಿ ಜತೆಗೆ ಇದ್ದೆ ಇರುತ್ತಿದ್ದರು. ಹಿರಿಯರಾದ ,(ನನ್ನ ಅಮ್ಮನಿಗಿಂತ ಎರಡು ವರ್ಷ ಹಿರಿಯರು) ರಾಜೇಶ್ವರಿ ಯವರ ಜತೆ ಒಂದು ಗೆಳೆತನ ಬೆಳೆಯಿತು. ಆದರೆ ಅವರು ಎಂದೂ ತಮ್ಮ ಅಭಿಪ್ರಾಯ ಗಳನ್ನು ನನ್ನ ಮೇಲೆ ಹೇರಲಿಲ್ಲ. ಅವರ ಮನೆಗೆ ಹೋದಾಗೆಲ್ಲ ಅವರ ತೋಟದ ಹಣ್ಣುಗಳು, ಹೂಗಿಡ ಗಳನ್ನು ಕೊಟ್ಟು ಕಳುಹಿಸಿದ್ದಾರೆ. ಅವರು ಕೊಟ್ಟ ಡೋವ್ ಆರ್ಕಿಡ್ ನಾಲ್ಕಾರು ಗಿಡಗಳಾಗಿವೆ. ನೀಲಿ ಹೂವಿನ ತಂಬರ್ಜಿಯ ಬಳ್ಳಿ ಚಿಕ್ಕದಾಗಿ ಪ್ರೊನ್ ಮಾಡಿದ್ದೇನೆ. ತೇಜಸ್ವಿ ಇದ್ದಾಗ ಒಮ್ಮೆ ಅವರ ಮನೆಗೆ ಹೋದಾಗ ಕಾಡು ಮರಕೆ ಹಬ್ಬಿ ಮೈತುಂಬ ಹೂಬಿಟ್ಟು ಕಂಗೊಳಿಸುತ್ತಿದ್ದ ಅದನ್ನು ನಾನು ನೆಡಬೇಕು ಅಂದಾಗ ತೇಜಸ್ವಿ ನೀವು ಅದನ್ನು ಹಬ್ಬಿಸಲು ಮರ ಎಲ್ಲಿಂದ ತರುತ್ತೀರಿ ಎಂದು ತಮಾಷೆ ಮಾಡಿದ್ದರು. ರಾಜೇಶ್ವರಿ ಇರುವ ಜಾಗದಲ್ಲಿಯೇ ಬೆಳೆಸಿ ಎಂದು ಒಂದು ಗಿಡ ಕೊಟ್ಟಿದ್ದರು.ಹದಿನೈದು ವರ್ಷ ಗಳ ಹಿಂದೆ..ಈಗ ಅದು ಹೂ ನಲ್ಲಿದೆ. ಪ್ರತೀ ಚಳಿಗಾಲದಲ್ಲಿ ಹೂ ಬಿಡುತ್ತದೆ. ರಾಜೇಶ್ವರಿ ಯವರಿಗೆ ಹೂಗಿಡಗಳ ಕುರಿತು ವಿಶೇಷ ಪ್ರೀತಿ..ಅವರ ಬಳಿ ಅಪರೂಪದ ಆರ್ಕಿಡ್ ಸಂಗ್ರಹ ಇತ್ತು.
ಮೊನ್ನೆ ಜುಲೈ ೨೩ ಎಂದೂ ಬಾರ ದ ಒಂದೇ ದಿನ ದಾಖಲೆ ಮಳೆ ಬಂತು ಮರುದಿನವೂ ಮುಂದುವರೆಯಿತು..ತೋಟದ ಮನೆಯಲ್ಲಿ ಒಬ್ಬರೇ ಇರುವ ಅವರಿಗೆ ಯೋಗಕ್ಷೇಮ ವಿಚಾರಿಸಲು ಕಾಲ್ ಮಾಡಿದೆ.. "ಹಲೋ ಏನ್ರೀ ನಿಮ್ಮ ಕಡೆ ಭಾರಿ ಮಳೆ ನಾ?" ಅವರೆ ಮೊದಲು ವಿಚಾರಿಸಿದರು.
"ಹೌದು ನಾನು ಹುಟ್ಟಿದ ಮೇಲೆ ಇಂತಹ ಮಳೆ ಕಂಡಿರಲಿಲ್ಲ ನೀವು ಹೇಗಿದೀರಿ"ನಾನು ಕೇಳಿದೆ. ,"ನನಗೇನು ಆರಾಮಾಗಿ ಇದೀನಿ ಮಗಳು ಬಂದಿದ್ದಾಳೆ". 'ಒಹೋ ಮೊಮ್ಮಕ್ಕಳ ಜತೆ ಮಜಾ,'. ಅಂದೆ ನಾನು..
ಈಗ ಮಳೆ ಕಾರಣ ಹೊರಗೆ ಅಂಗಳದಲ್ಲಿ ಗಿಡದ ಕೆಲಸ ಮಾಡುವಂತಿಲ್ಲ, ಮತ್ತೆ ಏನು ಚಟುವಟಿಕೆ ನಡೆಯುತ್ತಿದೆ ಅಂತ ಕೇಳಿದೆ. ಒಬ್ಬರು ಪ್ರಕಾಶಕರು ನನ್ನ,ಬಿಡಿ ಲೇಖನಗಳನ್ನು ಪ್ರಕಟಿಸುತ್ತೇವೆ ಅಂತ ಹೇಳಿದ್ದಾರೆ. ಅದರ ಪ್ರೂಫ್ ನೋಡುತ್ತಿದ್ದೇನೆ. ಅಂದರು ಒಹೋ ಮೂರನೆಯ ಪುಸ್ತಕ ಅಂದೆ ನಾನು. (ಅಭಿನವ ಪ್ರಕಾಶನ ದಿಂದ "ನನ್ನ ಡ್ರೈವಿಂಗ್ ಡೈರಿ" ಎಂಬ ಹೆಸರಿನಲ್ಲಿ ಆಪುಸ್ತಕ ಪ್ರಕಟವಾಗುತ್ತಿದೆ.)
ಹೂಗಿಡಗಳು ಹೇಗಿವೆ ," ಎಲ್ಲ ಫಸ್ಟ್ ಕ್ಲಾಸ್ ಆಗಿವೆ ಮೊನ್ನೆ ಕಿತ್ತಳೆ ಬಣ್ಣದ ದೆಂದ್ರೋಬಿಯಂ ಆರ್ಕಿಡ್ ಅರಳಿತ್ತು.ನಿಮ್ಮ ನೆನಪಾಯ್ತು.ಈಗ ಹತ್ತು ಪಾಟ್ ಗಳಲ್ಲಿ ಡೋವ್. ಆರ್ಕಿಡ್ ಮೊಗ್ಗು ಬಿಟ್ಟಿದೆ.".ಮಾತಿನಲ್ಲಿ ಉತ್ಸಾಹ. ನಾನು ಅಡಿಗೆ ಆಯ್ತಾ? ಕೇಳಿದೆ, ಇಲ್ಲ ಇನ್ನೂ ಆಗ್ತಾ ಇದೆ. ಮಕ್ಕಳು ಮನೆಯಲ್ಲಿ ಇದಾರಲ್ಲ ,ಚಿಕನ್ ಫ್ರೈ..ಮತ್ತು ಸಾರು, ಬೀನ್ಸ್ ಮತ್ತು ಕಾಳಿನಪಲ್ಯ. ಅಂದರು.
ನಾನು ಒಹೋ ಒಳ್ಳೇ ಗಮ್ಮತ್ತು .ಅಂದೆ
ಒಬ್ಬರೇ ಇದ್ದಾಗಲೂ ಅಡಿಗೆ ಮಾಡಲು ಎಂದಿನ ಉತ್ಸಾಹವೇ ಇರುತ್ತದೆ. ಸಾಮಾನ್ಯ ವಾಗಿ ಅವರ ಮೆನು ವಿನಲ್ಲಿ ಮೂರು ತರಕಾರಿ ಐಟಂ ಗಳಿರುತ್ತವೆ..ಒಂದು ಪಲ್ಯ ಚಟ್ನಿ , ಸಾರು ಅಥವಾ ಸಾಂಬಾರು. ಕೆಸುವಿನ ಸೊಪ್ಪನ್ನು ಗಂಟು ಕಟ್ಟಿ ಮಾಡುವ ಸಾಂಬಾರು, ಹೀರೆ ಸಿಪ್ಪೆಯ ಚಟ್ನಿ, ಕೆಸುವಿನ ದಂಟಿನ ಅಥವಾ ಸೊಪ್ಪಿನ ಪಲ್ಯ ಗಳು..ಪತ್ರೊಡೆ, ಪಕೋಡ ಗಳು ಹೀಗೆ.ಮಲೆನಾಡಿನ ವಿಶೇಷ ಗಳು. ಎಂಬತ್ನಾಲ್ಕರ ಈ ಪ್ರಾಯದಲ್ಲಿ ಯು ತಮ್ಮ ಅಡಿಗೆ ತಾವೇ ಮಾಡಿಕೊಳ್ಳಲು ಅವರಿಗೆ ಇಷ್ಟ ಮತ್ತು ಉತ್ಸಾಹ..ಮಳೆಗಾಲ ದಲ್ಲಿಯೂ ಮನೆಯ ಹಿಂಭಾಗದ ಜಗಲಿಯಲ್ಲಿ ಕುಳಿತು ಬಚ್ಚಲೊಲೆಯ ಬೆಂಕಿ ಉರಿಸಿ ನೀರು ಕಾಯಿಸುತ್ತಾರೆ..ತೋಟದಲ್ಲಿ ಅಷ್ಟೊಂದು ಕಟ್ಟಿಗೆ ಇರುತ್ತಲ್ಲ ಓಲೆ ಉರಿಸಿದರೆ ಹಂಡೆಯ ನೀರು ಇಡೀ ದಿನ ಬಿಸಿ ಇರುತ್ತಲ್ಲ ಅನ್ನು ತ್ತಾರೆ.. ಬಹುಶಃ ಓಲೆ ಉರಿಸಿ ನೀರು ಕಾಯಿಸುವ ಕೆಲಸ ಅವರಿಗೆ ಹಳೆಯ ಬೆಚ್ಚನೆ ನೆನಪು ತರುತ್ತಿರ ಬಹುದು. ಹಿಂಭಾಗದ ತೆರೆದ ಸಿಟೌಟ್ ನ ಒಂದು ಬದಿಗೆ ಬಚ್ಚಲ ಒಲೆ ಇದೆ. ಹೊರಗಡೆ ಕಾಣುವ ಹೂ, ಹಕ್ಕಿ ಹೊಳೆಯುವ ಕೆರೆ ನೀರನ್ನು ನೋಡುತ್ತಾ ಓಲೆ ಉರಿಸಿ ಚಳಿ ಕಾಯಿಸುತ್ತ ಹಳೆಯ ದಿನಗಳನ್ನು ಮೆಲಕು ಹಾಕಬಹುದು.
ಅವರ ಊರಿನ ಸಮೀಪ ಯಾವುದಾದರೂ ಕಾರ್ಯಕ್ರಮ ಕೆ ಹೋದಾಗ ಅವರಿಗೆ ಬಿಡೂವಿದ್ದರೆ ಹೋಗಿ ಮಾತಾಡಿಕೊಂಡು ಬರಬಹುದು ಅಂತ ಫೋನ್ ಮಾಡಿದ್ರೆ ಬನ್ನಿ ಮಾರಾಯರೇ ಅಂತ ಹೇಳಿ. ನಾವು ಹೋಗುವುದ ರೊಳಗೆ ತಿಂಡಿ ಮಾಡಿ ಇಡುವುದು ಅವರ ರೀತಿ.
ಆಲೂ ಪಲ್ಯ ವನ್ನು ಬ್ರೆಡ್ ಸ್ಲೈಸ್ ಒಳಗೆ ಇಟ್ಟು ಎಣ್ಣೆಯಲ್ಲಿ ಕರಿದು ಮಾಡುವ ಬ್ರೆಡ್ ಬೋಂಡಾ ತುಂಬಾ ರುಚಿ..ಅವರ ಕೈನಲ್ಲಿ..ಹಾಗೆ ಸರಳ ವಾಗಿ ಇಡೀ ಬೀನ್ಸ್ ಮಧ್ಯೆ ಸೀಳಿ ಮಾಡುವ ಫ್ರೆಂಚ್ ಫ್ರೈ ಕೂಡ.. ಎಷ್ಟು ಬೇಕೋ ಅಷ್ಟೇ ಸಮಯ ಹುರಿದು, ಕರಿದು ಬೇಯಿಸಿ ಪದಾರ್ಥ ಗಳ ರುಚಿ ಹೆಚ್ಚಿಸುವುದೇ ಅಡಿಗೆ..ಅದು ಅವರಿಗೆ ಸಿದ್ಧಿಸಿದೆ..ತೋಟದ ಕೆಲಸ ನಿರ್ವಹಣೆ, ಬರವಣಿಗೆ, ಎಲ್ಲದರಲ್ಲೂ ಅವರದೇ ವೈಶಿಷ್ಟ್ಯ ಇದೆ.
.ತುಂಬಾ ಆತ್ಮವಿಶ್ವಾಸದ ನಡೆ ನೇರ ನಿಷ್ಠುರ ನುಡಿಯ ಅವರು ಎಂದೂ ಬೇರೆಯವರ ಕುರಿತು ಟೀಕೆ ಟಿಪ್ಪಣಿ ಮಾಡುವುದಿಲ್ಲ. ಯಾರಾದರೂ ಮನಸಿಗೆ ನೋವಾಗುವಂತೆ ನಡೆದುಕೊಂಡಿ ದ್ದು ಹೇಳಿದರೆ "ಬಿಟ್ಟಹಾಕ್ರಿ ಬುದ್ಧಿ ಇಲ್ಲ ದವರ ಮಾತಿಗೆ ಬೆಲೆ ಕೊಡಬಾರದು..ನಮ್ಮ ಜೀವನ ನಮ್ಮದು" ಅನ್ನುವರು. ಪ್ರತೀ ವಿಷಯದ ಕುರಿತು ಅವರಿಗೆ ಖಚಿತ ಅಭಿಪ್ರಾಯ ವಿದೆ. ಸಮಕಾಲೀನ ಸಾಮಾಜಿಕ ರಾಜಕೀಯ ಆಗುಹೋಗಗಳಿಗೆ ಪ್ರತಿಕ್ರಿಯಿಸುತ್ತಾರೆ. ಪುಸ್ತಕ ಬಿಡುಗಡೆ, ಸಾಹಿತ್ಯ ಕಾರ್ಯಕ್ರಮ ಗಳಿಗೆ ಅಹ್ವಾನಿಸಿದರೆ ಹೋಗುತ್ತಾರೆ. ಆರು ದಶಕಗಳ ಹಿಂದೆ ತತ್ವ ಶಾಸ್ತ್ರ ದಲ್ಲಿ ಸ್ನಾತಕೋತ್ತರ ಪದವಿ ಓದಿರುವುದು ಇವತ್ತಿಗೂ ತತ್ವಶಾಸ್ತ್ರದ ಓದಿನಲ್ಲಿ ಆಸಕ್ತಿ ಇದೆ. ಗಂಭೀರ ಸಾಹಿತ್ಯ ದಓದು ಇಷ್ಟ.
ಸಂಗೀತ ದಲ್ಲಿ ಆಸಕ್ತಿ ಇರುವುದರಿಂದ ಸಂಗೀತ ಕೇಳುವುದು, ಚಂದನ ವಾಹಿನಿಯಲ್ಲಿ ಕೆಲವು ಕಾರ್ಯಕ್ರಮ ನೋಡುವುದು, ಇಷ್ಟ ವಾದ ಇಂಗ್ಲಿಷ್ ಮತ್ತು ಕನ್ನಡ ಪುಸ್ತಕ ಓದುವುದು , ಮನೆ ಕೆಲಸ, ಹೂಗಿಡಗಳ ಕೆಲಸ, ಕೋವಿದ್ ಸಮಯದಲ್ಲಿಯೂ ಬರುವ ವಿಸಿಟರ್ಸ್ ದೂರದಿಂದಲೇ ಮಾತಾಡಿಸಿ ಕಳಿಸುವುದು .ಈ ಕೆಲಸಗಳ ಮಧ್ಯೆ ..ಯಾರನ್ನು ಮಾತಾಡಿಸಲು ಸಮಯವೇ ಇಲ್ಲ ಕಂಡ್ರಿ...ತೋಟದ ಕೆಲಸ , ಆಳುಗಳಿಗೆ ಬಟವಾಡೆ ಲೆಕ್ಕ ಬರೆಯುವುದು..ಪುರುಸೊತ್ತೇ ಇಲ್ಲ ಯಾರಾದರೂ ಬಂದರೆ ಕೆಲಸ ಹಾಳು.. ಎಂಬತ್ತನಾಲ್ಕನೇ ವಯಸ್ಸಿನಲ್ಲಿಯು ತಮ್ಮನ್ನು ಬ್ಯುಸಿ ಆಗಿ ದೈನಿಕ ಗಳಲ್ಲಿ ತೊಡಗಿಸಿ ಕೊಂಡ ಅವರ ಕುರಿತು ನನಗೆ ಮೆಚ್ಚುಗೆ..
.. ಸಣ್ಣ ಪುಟ್ಟ ಆರೋಗ್ಯದ ತೊಂದರೆಗಳಿಗೆ ತಾವೇ ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದು ಬರುತ್ತಾರೆ. ಯಾರ ಸಹಾಯವನ್ನು ನಿರೀಕ್ಷಿಸದ ಅವರ ಸ್ವಾವಲಂಬಿ ಮನೋಭಾವ ನನಗೆ ಇಷ್ಟ..ಯಾವತ್ತೂ ಯಾರನ್ನೂ ನಿಂದಿಸದೆ, ಆಕ್ಷೇಪಿಸದೆ ತಮ್ಮಷ್ಟಕ್ಕೆ ತಾವು ಲವಲವಿಕೆಯ ಬದುಕು ರೂಪಿಸಿಕೊಂಡಿರುವವರು ರಾಜೇಶ್ವರಿ ಅವರು. ಇವರ ಜೊತೆಗೆ ಮಾತಾಡಿದಾಗ ಮನಸ್ಸಿಗೆ ನೆಮ್ಮದಿ ಸಿಗುವುದು.
ರಾಜೇಶ್ವರಿ ಯವರನ್ನು ಮೊದಲು ನೋಡಿದ್ದು ನಾನು ಮೈಸೂರಿನಲ್ಲಿ ಎಂ ಎ ಓದುತ್ತಿದ್ದಾಗ ಒಮ್ಮೆ ಮಾತ್ರ..ತೇಜಸ್ವಿಯವರ ಸೋದರ ಸಂಬಂಧಿ ಅನಲ ಆಗ ಕುವೆಂಪು ಮನೆಯಿಂದ ಗಂಗೋತ್ರಿಗೆ ಬರುತ್ತಿದ್ದಳು..ನನ್ನ ಸಹಪಾಠಿ .ಅವಳ ತಂದೆ ಕರ್ನಾಟಕ ಸರ್ಕಾರದ ಕಾನೂನು ಕಾರ್ಯದರ್ಶಿ ಯಾಗಿದ್ದರು.ಅವರು ತೀರ್ಥಹಳ್ಳಿ ಯ, ನಂಬಳ ದವರು.. ಅನಲ ನನ್ನ ಗೆಳತಿಯಾದುದರಿಂದ ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದೆ. ಒಮ್ಮೆ ನಾವಿಬ್ಬರೂ ಸಿಟಿಗೆ ಹೊರಟಾಗ ಅವಳ ದೊಡ್ಡಮ್ಮ ಹೇಮಾವತಿ ಯವರು ಕೆ ಆರ್ ಸರ್ಕಲ್ ನಲ್ಲಿ ಶಂಕರ್ ಟೈಲರ್ ಸ್ ಹತ್ತಿರ. ರಾಜೇಶ್ವರಿ ಬ್ಲೌಸ್ ಹೊಲೀಯಲು ಕೊಟ್ಟಿದ್ದಾಳೆ. ತನ್ನಿ ಎಂದು ಒಂದು ವೈರ್ ಬುಟ್ಟಿ ತಂದುಕೊಟ್ಟರು.ಅನಲ ಅದನ್ನು ನೋಡಿ ನಗತೊಡಗಿದಳು..ಪಾಪ ಅವರು ಯಾಕೆ ನಗುತ್ತಿದ್ದೀಯ ಅಂದರು. ಅಲ್ಲಿಯೇ ಇದ್ದ ತಾರಿಣಿ ಬ್ಯಾಗ್ ಅವರ ಸ್ಟೈಲ್ ಗೆ ಕಡಿಮೆ ಅಂತ ಅಂದರು..ನಾನು ಹಾಸ್ಟೆಲ್ ಹುಡುಗಿಯರು ಶಂಕರ್ ಟೈಲರ್ ಹತ್ತಿರ ತಮ್ಮ ಡ್ರೆಸ್ ಹೊಲಿಸುವುದನ್ನು ನೋಡಿದ್ದೆ. ಬಹಳ ಚೆನ್ನಾಗಿ ಹೊಲೀಯುತ್ತಾರೆ ಎಂದು ನಾನೂ ಹೊಲೆಸಿದ್ದೇ..ಮೂಡಿಗೆರೆ ಯಲ್ಲಿದ್ದ ರಾಜೇಶ್ವರಿ ಮೈಸೂರಿನಲ್ಲಿ ಬ್ಲೌಸ್ ಹೊಲಿಸುವುದು ಕೇಳಿ ಬಹಳ ಸ್ಟೈಲ್ , ಆಧುನಿಕರು ಅಂದುಕೊಂಡೆ..
.ಆಮೇಲೆ ಅವರನ್ನು ನೋಡಿದ್ದು ಹದಿನೈದು ವರ್ಷಗಳ ನಂತರ ಕುಪ್ಪಳಿಯಲ್ಲಿ ಕುವೆಂಪು ತೊಂಬತ್ತು ಕಾರ್ಯ ಕ್ರಮ ದಲ್ಲಿ. ಆಮೇಲೆ ಅವರು ಕುಪ್ಪಳಿಯ ಸಾಹಿತ್ಯ ಅಧ್ಯಯನ ಶಿಬಿರ ಗಳಿಗೆ ಬೇರೆ ಕಾರ್ಯ ಕ್ರಮ ಗಳಿಗೆ ತೇಜಸ್ವಿ ಜತೆಗೆ ಬರುತ್ತಿದ್ದರು. ಬಹಳ ಸದಭಿರುಚಿಯ ವೇಷ ಭೂಷಣ ಅವರದು.
ನಾವು ಕರೆದಾಗ ಇಲ್ಲ ಅನ್ನದೆ ತೀರ್ಥಹಳ್ಳಿ ಯಲ್ಲಿ ನಡೆದ ಮಹಿಳಾ ವೇದಿಕೆ ಕಾರ್ಯ ಕ್ರಮಕೆ ತೇಜಸ್ವಿ ಜತೆ ಬಂದರು..ನಮ್ಮ ಕಾಲೇಜ್ ಕಾರ್ಯ ಕ್ರಮ ಕ್ಕೂ ಬಂದರು. ನಮ್ಮ ಮನೆಗೂ ಎರಡು ಸಲ ಬಂದರು. ಹಾಗೆ ಚಿಕ್ಕ ಮಗಳೂರಿನ ಸಾಹಿತ್ಯದ ಕಾರ್ಯ ಕ್ರಮ ಗಳಿಗೆ ಹೋದಾಗ ನಾವೂ ಅವರ ಮನೆಗೆ ಹೋದೆವು..ತೇಜಸ್ವಿ ಇದ್ದಾಗ ಎರಡು ಸಲ ಹೋಗಿದ್ದೆವು. ಒಮ್ಮೆ ನನ್ನ ಕಸಿನ್ ಒಬ್ಬಳ ಮದುವೆ ಆದಾಗ ಅವರ ಮನೆಯಿಂದ ಹೋಗಿದ್ದೆವು..ಆಗಲೇ ನನಗೆ ತೇಜಸ್ವಿ ತಮ್ಮನ್ನು ಕಾಫೀ ಪ್ಲಾಂಟರ ಅಂತ ಗುರುತಿಸಿಕೊಳ್ಳುತಿರಲಿಲ್ಲ ಎಂದು ತಿಳಿದಿದ್ದು. ಮತ್ತೊಮ್ಮೆ ಕುವೆಂಪು ಶತಮಾನೋತ್ಸವಕ್ಕೆ ಭಾಷಣ ಮಾಡಲು ಚಿಕ್ಕ ಮಗಳೂರಿಗೆ ಹೋದಾಗ ಕಾರ್ಯ ಕ್ರಮದ ಆಯೋಜಕರಲ್ಲಿ ಒಬ್ಬರಾದ ಮೋಹಿನಿ ಸಿದ್ದೆಗೌಡರು ಸಂಜೆಯ ಕಾರ್ಯಕ್ರಮ ಮುಗಿದ ಬಳಿಕ ರಾತ್ರಿ ಉಳಿಯಲು ಅವರ ಮುದ್ರೆಮನೆ ತೋಟಕ್ಕೆ ಮೂಡಿಗೆರೆ ಗೆ ಕರೆದುಕೊಂಡು ಹೋದರು. ಮಾತಿನ ಮಧ್ಯೆ ಅಲ್ಲಿದ್ದ ಭಾಸೆ ಗೌಡ ಅನ್ನುವ ಪ್ಲಾಂಟರ್ ಆನೆ ಸಾಕಿದ್ದರು. ತೇಜಸ್ವಿಯವರ ಕೃಷ್ಣೆ ಗೌಡರ ಆನೆ ಕಥೆಗೆ ಅದೇ ಸ್ಪೂರ್ತಿ ಅಂದರು. ತೇಜಸ್ವಿ ಮನೆ ಇಲ್ಲೇ ಹತ್ತಿರ ಎಂದು ಬೆಳಿಗ್ಗೆ ತಿಂಡಿಯ ನಂತರ ತೇಜಸ್ವಿಯವರ ಮನೆಗೆ ಹೋದೆವು..ಮೋಹಿನಿ ಹೀಗೆ ಬರುತ್ತಿದ್ದೇವೆ ಎಂದು ಫೋನ್ ಮಾಡಿದ್ದ ರಿಂದ ರಾಜೇಶ್ವರಿ ತೇಜಸ್ವಿ ಮೂಲಕ ಮೂಡಿಗೆರೆ ಯಿಂದ ಕೇಕ್ ಮತ್ತು ಸ್ವೀಟ್ಸ್ ತರಿಸಿದ್ದರು. ಅವರು ಮೂವರು ಬಹುಕಾಲದ ಪರಿಚಿತರು ಆತ್ಮೀಯ ವಾಗೀ ಮಾತನಾಡುತ್ತಾ ಕುಳಿತರು. ಮೋಹಿನಿಯವರು ಬಿ ಜೇ ಪಿ.. ಪಕ್ಷದ ರಾಜಕಾರಣಿ..ತೇಜಸ್ವಿ ಅವರ ರಾಜ ಕಾರಣ ಒಪ್ಪದಿದ್ದರೂ ಸ್ನೆಹಕೆ ಅದೇನೂ ಅಡ್ಡಿಯಾಗಿರಲಿಲ್ಲ. ಇವತ್ತು ಎಡ,ಬಲ ಎಂದು ಕಿತ್ತಾಡುವವರು ಗಮನಿಸಬೇಕು.
ಒಮ್ಮೆ ರಂಗಶಂಕರ ದಲ್ಲಿ ಒಡಕಲ ಬಿಂಬ ನಾಟಕ ನೋಡಲು ತೇಜಸ್ವಿ, ರಾಜೇಶ್ವರಿ ಬಂದಿದ್ದರು. ಅವರ ಹಿಂಭಾಗ ದಲ್ಲಿ ಕುಳಿತಿದ್ದ ನಮಗೆ.ನಾಟಕ ಅರ್ಧ ಆಗುವು ದ ರೊಳಗೆ ತೇಜಸ್ವಿ ಯವರು ಹೊರಗೆ ಹೋಗಲು ಚಡಪಡಿಸುತ್ತಿದ್ದ ದ್ದು ತಿಳಿಯಿತು.. ಅವರಿಗೆ ಕೆಲವು ದಿನಗಳ ಮೊದಲು ಕಾಲಿನ ಶಸ್ತ್ರಕ್ರಿಯೆ ಆಗಿ ಚೇತರಿಸಿಕೊಂಡಿದ್ದ ರು. ಬಹಳ ಹೊತ್ತು ಕುಳಿತು ಕೊಳ್ಳಲು ಕಷ್ಟ..ಆದರೆ ರಂಗಶಂಕರದ ನಿಯಮದಂತೆ ಮಧ್ಯದಲ್ಲಿ ಹೊರಹೋಗುವಂತೆ ಇರಲಿಲ್ಲ..ರಾಜೇಶ್ವರಿ ಅವರನ್ನು ಸಮಾಧಾನಿಸಿ ಕೂರಿಸಿದರು.
ಹೀಗೆ ಹಲವಾರು ಬಾರಿ ರಾಜೇಶ್ವರಿ ಅವರ ಒಡನಾಟ ದೊರೆತಿದ್ದು ನನ್ನ ಅದೃಷ್ಟ. ಆದರೆ ಮತ್ತೆ ಹೋದಾಗ ತೇಜಸ್ವಿ ಇಲ್ಲದ ನಿರುತ್ತರ ಮೌನ ತಾಳಿತ್ತು...ಆದರೆ ರಾಜೇಶ್ವರಿ ಯವರ ಜೀವಂತಿಕೆ ಅವರಿಗೆ ಸುಮ್ಮನಿರಲು ಬಿಡಲಿಲ್ಲ.ತೇಜಸ್ವಿ ನೆನಪು ಗಳನ್ನು ಬರೆದರು. ಹಸ್ತಪ್ರತಿಯಲ್ಲೀ ಓದಲು ಅವಕಾಶ ಕೊಟ್ಟರು. ಆಮೇಲೆ ನಿಮ್ಮ ಬಾಲ್ಯದ ಕುರಿತು ನೀವು ಏನೂ ಬರೆದಿಲ್ಲ ಅಂದಾಗ "ನಮ್ಮ ಮನೆಗೂ ಬಂದರು ಗಾಂಧೀಜಿ" ಬರೆದರು. ಮುನ್ನುಡಿ ಬರೆದುಕೊಡಿ ಅಂದರು ಹಿರಿಯರು ಯಾರಾದರೂ ಬರೆಯಲಿ ಅಂದೆ ನಾನು. ಇಲ್ಲ ನೀವೇ ಬರೆಯಿರಿ ಅಂತ ಬರೆಸಿಕೊಂಡರು.. ಎರಡೂ ಪುಸ್ತಕ ಗಳು ಮರುಮುದ್ರಣ ಆದವು. ಬಹುಮಾನ ಬಂದವು..ಈಗ ಮೂರನೇ ಪುಸ್ತಕ ಹೊರ ಬರುತ್ತಿದೆ..
ಒಮ್ಮೆ ಕೊಲ್ಲಾಪುರ ದಿಂದ ಗೆಳತಿ ನಾಗರತ್ನ ಬಂದಾಗ ಚಿಕ್ಕಮಗಳೂರಿಗೆ ಹೋಗುವ ದಾರಿಯಲ್ಲಿ ಅವರ ಮನೆಗೆ ಹೋಗಿದ್ದೆವು. ಕಲ್ಕತ್ತ ದಿಂದ ಬಂದ ಅನಲ ಚಿಕ್ಕಮಗಳೂರಿನ ಶಾರದಾ ಮಠ ದಲ್ಲಿದ್ದಾಗ ನೋಡಲು ಹೋಗಿದ್ದೆ. ರಾಜೇಶ್ವರಿ ಅಕ್ಕ ನ ಮನೆ ಎಷ್ಟು ದೂರ ಅಂದಾಗ ಅರ್ಧ ಗಂಟೆ ಅಂದೆ. ಹಾಗಾದರೆ ಅವರನ್ನು ನೋಡಬಹುದಿತ್ತು ಅಂದಾಗ ಕರೆದುಕೊಂಡು ಹೋದೆ..ಒಬ್ಬರು ಸನ್ಯಾಸಿ ,ಇನ್ನೊಬ್ಬರು ತೀವ್ರ ಜೀವನಾಸಕ್ತಿ ಉಳ್ಳವರು..ಇಬ್ಬರ ಮಾತುಗಳನ್ನು ಕೇಳಿ ಸಿಕೊಳ್ಳುವುದು ಆಸಕ್ತಿದಾಯಕ ವಾಗಿತ್ತು. ಅವರ ಜೀವ ನಾಸಕ್ತಿ ನೋಡಿದವರು ಯಾರೂ ಅವರಿಗೆ 84 ವರ್ಷ ಎಂದು ಹೇಳುವಂತಿರಲಿಲ್ಲ..ಒಂದು ಹಲ್ಲು ಸಹ ಬಿದ್ದಿರಲಿಲ್ಲ..ನಮ್ಮ ತಾಯಿ ನಮ್ಮ ನ್ನೆಲ್ಲ್ಲಾ ಗಟ್ಟಿಯಾಗಿ ರೂಪಿಸಿ ಭೂಮಿಗೆ ತಂದಿದ್ದಾರೆ ಅನ್ನುತ್ತಿದ್ದರು.. ವಯಸ್ಸಿನಲ್ಲಿ ರಾಜೇಶ್ವರಿ ತೇಜಸ್ವಿಯವರಿಗಿಂತ ಒಂದು ವರ್ಷ ಹಿರಿಯರು. ಮೈಸೂರಿನಲ್ಲಿ ಓದುವಾಗ ತೇಜಸ್ವಿ ಯವರ ಪರಿಚಯ, ಪ್ರೀತಿ ಆಗಿ ಮದುವೆ ಆಗುವುದಾಗಿ ನಿರ್ಧರಿಸಿದಾಗ ತೇಜಸ್ವಿ ಇನ್ನೂ ಯಾವುದೇ ಉದ್ಯೋಗ ದಲ್ಲಿ ನೆಲೆ ನಿಂತಿರಲಿಲ್ಲ. ರಾಜೇಶ್ವರಿ ಯವರ ಅಣ್ಣ ಮೂಡಿಗೆರೆ ಸಮೀಪ ಭೂತನ ಕಾಡಿನಲ್ಲಿ ಕಾಫಿ ತೋಟ ಮಾಡುತ್ತಿದ್ದರು. ರಾಜೇಶ್ವರಿ ಯವರು ತಾಯಿ ಮತ್ತು ಅಣ್ಣನ ಜತೆ ಭೂತನ ಕಾಡಿನ ಮನೆಯಲ್ಲಿದ್ದರು..ತೇಜಸ್ವಿ ಸಮೀಪದ ಜನ್ನಾಪುರದ ಬಳಿ ಜಮೀನು ಕೊಂಡು ಮನೆ ಕಟ್ಟಿ ರಾಜೇಶ್ವರಿ ಯವರನ್ನು ಮದುವೆ ಆಗುವ ವರೆಗೆ ದೀರ್ಘ ಐದು ವರ್ಷಗಳು ಕಳೆದಿದ್ದವು. ಅದೊಂದು ತಪಸ್ಸಿನ ತರಹ ಇತ್ತು ಎಂದು ಹೇಳಿದ್ದರು.
.ತೇಜಸ್ವಿ ಯವರ ಜತೆಗಿನ ದಾಂಪತ್ಯ ಕುರಿತು *"'ನನ್ನ ತೇಜಸ್ವಿ'* ಎಂಬ ಪುಸ್ತಕ ಬರೆದಿದ್ದಾರೆ.. ತಮ್ಮ ಬಾಲ್ಯವನ್ನು ಕುರಿತು, *'ನಮ್ಮ ಮನೆಗೂ ಬಂದರು ಗಾಂಧೀಜಿ'*. ಎಂಬ ಪುಸ್ತಕ ಬರೆದಿದ್ದಾರೆ.
ಈಗ ಮೂರನೆಯ ಪುಸ್ತಕ *"ನನ್ನ ಡ್ರೈವಿಂಗ್ ಡೈರಿ"* ಅಭಿನವ ಪ್ರಕಾಶನ ದಿಂದ ಪ್ರಕಟಣೆಯ ಹಂತದಲ್ಲಿದೆ. ಮಕ್ಕಳು ಮೊಮ್ಮಕ್ಕಳ ಜತೆಗಿನ 84 ವರ್ಷ ಗಳ ತುಂಬು ಜೀವನದ ಬಳಿಕ ರಾಜೇಶ್ವರಿ ಬದುಕಿಗೆ ವಿದಾಯ ಹೇಳಿದ್ದಾರೆ. ಅವರ ನಗುಮುಖ, ಉಲ್ಲಾಸದ ಮಾತು ಎಂದಿಗೂ ಸವಿನೆನಪಾಗಿ ಇರುತ್ತವೆ. ಅವರ ಮಾದರಿ ವ್ಯಕ್ತಿತ್ವ, ಋಜು ಸ್ವಭಾವ ಮುಂದಿನ ಪೀಳಿಗೆಗೆ ಆದರ್ಶವಾಗಿದೆ.
*-ಎಲ್.ಸಿ. ಸುಮಿತ್ರಾ*