29/12/2025
ಬಾಲ್ಯದಲ್ಲಿ ನಂಗಿದ್ದ ಸಂಸ್ಕೃತ, ವೇದ-ವೇದಾಂತಗಳ ಹುಚ್ಚಿನ ಸಂತೆಯಲ್ಲಿ, ರಾಜಕೀಯ ಪ್ರಜ್ಞೆಯೇ ಅರಿವಾಗದ ಆ ಕಾಲದಲ್ಲಿ "ಕುವೆಂಪು ಓದು" ಸಿಕ್ಕಿದ್ದರಿಂದ ನಾನು ಮನುಷ್ಯನಾಗಿ ಉಳಿದುಕೊಂಡಿದ್ದೇನೆ, ಇಲ್ಲವಾದಲ್ಲಿ ಬಲಪಂಥೀಯರ ಬಲೆಗೆ ಸಿಕ್ಕು ಮೃಗಭಕ್ತನಾಗಿ ಪಳಗಿ ಹೋಗಿರುತ್ತಿದ್ದೆ. ಅದನ್ನ ನೆನೆಸಿಕೊಂಡರೇ ಮೈ ನಡುಗಿಹೋಗತ್ತೆ. ಶಾಲೆಗೆ ಬರುವ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು ಯಾರನ್ನೂ ಬಿಡದ ಬೇತಾಳದಂತೆ ಬಲಪಂಥೀಯ ಪರಿವಾರಗಳು ಧರ್ಮ, ಜಾತೀಯ ಕಟ್ಟಳೆಗಳ ಕೊಳೆಯ ಹೊರೆಯನ್ನು ಹೊರಿಸುತ್ತಿದ್ದಾಗ ಅವುಗಳಿಂದ ಪಾರಾಗುವ, ಅನಿಕೇತನವಾಗುವ ಪ್ರಜ್ಞೆಯನ್ನು ನನ್ನಲ್ಲಿ ಬೆಳೆಸಿದ್ದೇ ಕುವೆಂಪು ಓದು. ಓದಿದಷ್ಟೂ ಕಾಲದಲ್ಲಿ ಪ್ರಸ್ತುತವೇ ಎನಿಸುವಷ್ಟು ಸ್ಪಷ್ಟ ಮತ್ತು ತೀಕ್ಷ್ಣವಾದ ಕುವೆಂಪು ನೋಟಗಳು, ನನ್ನ ಬದುಕಿನ ನೋಟಗಳನ್ನು ಕಟ್ಟಿಕೊಳಲು ಆಸರೆ ಒದಗಿಸಿವೆ.
ಕುವೆಂಪು ಓದು ನನ್ನ ಬದುಕನ್ನು ಕಡೆದು ಕುಶಲಗೊಳಿಸಿ ಮೂರ್ತಿಯಾಗಿಸಿದೆ. ಬುದ್ದಿ ಮತ್ತು ಪ್ರಜ್ಞೆಗಳನ್ನು ಜಾಗೃತಗೊಳಿಸಿದೆ. ಅಧ್ಯಾತ್ಮ ಮತ್ತು ವೈಚಾರಿಕತೆಗಳಿಗೆ ಸ್ಪಷ್ಟ ರೂಪು ಒದಗಿಸಿದೆ. ಅದಕ್ಕಾಗಿ ಅವರಿಗೆ ಮತ್ತು
ಕನ್ನಡ ನುಡಿಗೆ ನಾನು ಕೃತಜ್ಞ. . ❤💛
ಆದರೆ ನನ್ನದೇ ಪೀಳಿಗೆಯಲ್ಲಿ ಓದು-ಬರಹಗಳಿಗೆ ಎಡತಾಗದೇ ಭಾಷಣ, ಬೈಠಕ್ ಗಳಲ್ಲಿ ಕುಳಿತಿದ್ದ ಕೆಲವರು ಮತ್ತು ಸಮಾಜ ಪ್ರಜ್ಞೆಯೇ ಅವ್ಯಕ್ತವಾಗಿದ್ದು ಈಚೆಗೆ ವಾಟ್ಸಪ್ ನಲ್ಲಿ ಬಂದ ಸುಳ್ಸುದ್ದಿಗಳ, ಹೆಣೆದ ಹಗೆಯ ವಿಡಿಯೊ, ಆಡೀಯೋಗಳ ಅನುಯಾಯಿಗಳಾಗಿರುವ ಹಲವರು ಗೆಳೆಯರು ಇಂದು ಮೃಗಭಕ್ತರಾಗಿ ಸಮಾಜದ ರಕ್ತ ಹೀರುವುದನ್ನ ಕಾಣುತ್ತಿದ್ದೇನೆ.
ನಮ್ಮ ಓದು ಅಥವಾ ಶಿಕ್ಷಣ ನಮ್ಮನ್ನು ಮನುಷ್ಯರಾಗಿಸಬೇಕು, ಮೃಗಭಕ್ತರಾಗಿಸಬಾರದು. ಹಾಗಾಗಿ ನಾವು ಮತ್ತು ನಮ್ಮ ಮಕ್ಕಳು ಏನು ಓದಬೇಕೆಂದು ಸರಿಯಾಗಿ ನಿಶ್ಚಯಿಸಬೇಕು. ಸ್ವಲ್ಪ ಯಾಮಾರಿದರೂ ಲೋಕಕಂಟಕರಾಗಿ ಬಿಡುವ ಅವಕಾಶಗಳೇ ಇಂದು ಹೆಚ್ಚಿವೆ. ಹಾಗಾಗಿ ನಾವು ಆತ್ಮಶ್ರೀಗಾಗಿ ನಿರಂಕುಶಮತಿಗಳಾಗುವುದು ಮತ್ತು ಎಲ್ಲಾ ಮತ, ಪಥಗಳನೂ ತೊರೆದು ವಿಶ್ವಮಾನವರಾಗುವುದೇ ಲೋಕಪ್ರಜೆಗಳಾಗುವ ಮಾರ್ಗವೆಂದು ನನ್ನ ನಂಬುಗೆ. 🍁
#ಕುವೆಂಪು